ರಾಮನಾಥ
 	1253-95. ಹೊಯ್ಸಳ ಅರಸು ವೀರಸೋಮೇಶ್ವರ ಮತ್ತು ಅವನ ರಾಣಿಯಾದ ಸೋವಲದೇವಿಯರ ಮಗ. ರಾಮನಾಥನಿಗೂ ಇವನ ಮಲ ಸಹೋದರನಾದ ಮೂರನೆಯ ನರಸಿಂಹನಿಗೂ ಹೊಂದಾಣಿಕೆ ಇರಲಿಲ್ಲವಾಗಿ ವೀರಸೋಮೇಶ್ವರ ಸಾಮ್ರಾಜ್ಯವನ್ನು ಇಬ್ಬಾಗ ಮಾಡಿ ತಮಿಳುನಾಡಿನ ಪ್ರದೇಶಗಳನ್ನು ರಾಮನಾಥನಿಗೆ ಕೊಟ್ಟ. ಆದರೆ ಸ್ವಲ್ಪ ಕಾಲದಲ್ಲೇ ರಾಮನಾಥ ಮಧುರೆಯ ಜಟಾವರ್ಮನ್ ಸುಂದರ ಪಾಂಡ್ಯನಿಂದ ಪರಾಜಿತನಾಗಿ ತನ್ನ ರಾಜ್ಯದ ಹೆಚ್ಚು ಭಾಗಗಳನ್ನೂ ರಾಜಧಾನಿಯಾದ ವಿಕ್ರಮಪುರವನ್ನೂ ಕಳೆದುಕೊಂಡ. ಧರ್ಮಪುರಿ ಜಿಲ್ಲೆಯ ಹೊಸೂರು ಬಳಿಯ ಕುಂದಾಣಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ನರಸಿಂಹನ ರಾಜ್ಯದ ಮೇಲೆ ನಿರಂತರವಾದ ಆಕ್ರಮಣದಲ್ಲಿ ತೊಡಗಿದ. ಸೇಲಂ, ಧರ್ಮಪುರಿ, ಬೆಂಗಳೂರು ಮತ್ತು ಕೋಲಾರ (ಪಾಯಶಃ ಕೊಯಮತ್ತೂರು) ಜಿಲ್ಲೆಗಳ ಪ್ರದೇಶಗಳಷ್ಟೇ ಇವನ ಆಳ್ವಿಕೆಗೆ ಒಳಪಟ್ಟಿದ್ದವು. ಇವನು ಒಮ್ಮೆ ಕುಣಿಗಲಿನವರೆಗೂ ದಂಡೆತ್ತಿ ಹೋಗಿ ನರಸಿಂಹನಿಂದ ಪರಾಜಿತನಾಗಿ ಹಿಂದಿರುಗಿದ. ಕಮಲಾದೇವಿ ರಾಮನಾಥನ ರಾಣಿ. ಇವರ ಮಗ ವಿಶ್ವನಾಥ. ಈತ ತನ್ನ ತಂದೆಯ ಆಳ್ವಿಕೆಯ ಕೊನೆಗಾಲದಲ್ಲಿ ಆಡಳಿತದಲ್ಲಿ ಭಾಗವಹಿಸುತ್ತಿದ್ದ. ರಾಮನಾಥ 1295ರಲ್ಲಿ ಮೃತನಾದ. ಅನಂತರ 3ನೆಯ ಬಲ್ಲಾಳ ಇವನ ರಾಜ್ಯವನ್ನು ಮೂಲ ಹೊಯ್ಸಳ ರಾಜ್ಯಕ್ಕೆ ಸೇರಿಸಿಕೊಂಡ.     					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ